ಋತುಪರ್ಣ
	
ಅಯುತಾಜಿಲ್ ಎಂಬ ರಾಜನ ಮಗ. ಇಕ್ಷ್ವಾಕು ವಂಶಕ್ಕೆ ಸೇರಿದವ. ಅಯೋಧ್ಯೆಯ ರಾಜ, ನಳನ ಸ್ನೇಹಿತ. ಮಗ ಆರ್ತುಪರ್ಣಿ. ಅಕ್ಷ ಹೃದಯವನ್ನು ಅರಿತು ದ್ಯೂತವಾಡುತ್ತಿದ್ದವ. ನಳ ತನ್ನ ಮಡದಿಯನ್ನು ಮತ್ತೆ ಪಡೆಯಲು ಈತ ಮುಖ್ಯನಿಮಿತ್ತನಾದ. ಪರ್ಣಾದನೆಂಬ ಬ್ರಾಹ್ಮಣ ನಳನನ್ನು ಹುಡುಕಲು ಹೊರಟು ಇವನಲ್ಲಿಯೇ ನಳನನ್ನು ಪತ್ತೆ ಹಚ್ಚಿದ. ಇವನಲ್ಲಿಯೇ ಬಂದು ಸುದೇವ ದಮಯಂತೀಸ್ವಯಂವರ ವೃತ್ತಾಂತವನ್ನು ಪ್ರಕಟಪಡಿಸಿದ. ಅಕ್ಷಹೃದಯಜ್ಞನಾದುದರಿಂದ ಇವನ ಸ್ಮರಣೆಯಿಂದ ಕಲಿದೋಷನಿವೃತ್ತಿಯನ್ನು ಹೇಳಿದೆ. ಕಾರ್ಕೋಟಸಸ್ಯ ನಾಗಸ್ಯ ದಮಯನ್ತ್ಯಾನಲಸ್ಯಚ 1. ಋತುಪರ್ಣಸ್ಯ ರಾಜರ್ಷೇಃ ಕೀರ್ತನಂ ಕಲಿನಾಶನಂ|| ದ್ಯೂತದಲ್ಲಿ ಋತುಪರ್ಣನಿಗೆ ಯಾವಾಗಲೂ ಪರಾಜಯವಾಗುತ್ತಿಲ್ಲ. ಇವನಿಂದ ಅಕ್ಷಹೃದಯವರಿತು ನಳ ಕಲಿಯ ಆವೇಶವನ್ನು ಗೆದ್ದು ಸರ್ವದೋಷನಿವೃತ್ತಿಯನ್ನು ಹೊಂದಿದ. ಹರಿವಂಶದಲ್ಲೂ ಮಹಾಭಾರತದಲ್ಲೂ ಇವನ ಕಥೆ ಬರುತ್ತದೆ.
(ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ